ಚೆಲುವಾಂಬೆ
ಸು. 1725. ಕನ್ನಡ ಕವಿಯತ್ರಿ. ಮೈಸೂರಿನ ದೊರೆ ದೊಡ್ಡ ಕೃಷ್ಣರಾಜನ (1713-1731) ರಾಣಿ. ಕಳಲೆ ಕಾಂತನೃಪನ ಮಗಳು. ಕನ್ನಡದೊಂದಿಗೆ ಸಂಸ್ಕøತವನ್ನೂ ಆಳವಾಗಿ ಅಭ್ಯಾಸ ಮಾಡಿದ್ದಳು. ವರನಂದೀ ಕಲ್ಯಾಣ, ವೆಂಕಟಾಚಲ ಮಹಾತ್ಮ್ಯ ಲಾಲಿಪದ, ಅಲಮೇಲುಮಂಗೆ ಲಾಲಿಪದ, ತುಲಾಕಾವೇರಿ ಮಹಾತ್ಮ ಹಾಗೂ ಕೃಷ್ಣಕರ್ಣಾಮೃತ ವ್ಯಾಖ್ಯೆ-ಇವು ಈಕೆಯ ಕೃತಿಗಳು. ವರನಂದೀ ಕಲ್ಯಾಣ 881 ಪದ್ಯಗಳಿರುವ ಏಳುಸಂಧಿಗಳು ಸಾಂಗತ್ಯ ಶೃಂಗಾರ ಭಕ್ತಿರಸಗಳ ಎರಕದಲ್ಲಿ ರೂಪುಗೊಂಡಿದೆ. ದೆಹಲಿಯ ಬಾದಶಹನ ಮಗಳಾದ ವರನಂದಿ ಮೇಲುಕೋಟೆಯ ಚೆಲುವದೇವನನ್ನು ಮದುವೆಯಾದ್ದು ಇದರ ವಸ್ತು. ದ್ವಾಪರದಲ್ಲಿ ಸತ್ಯಭಾಮೆ ಪ್ರಣಯಕೋಪದಿಂದ ಕೃಷ್ಣನಿಗೆ ಹೇಳಿದಳಂತೆ-ಈಗ ನೀನು ಬಲವಂತದಿಂದ ನನ್ನನ್ನು ಲಗ್ನವಾದಂತೆ ಕಲಿಯುಗದಲ್ಲಿ ನಾನು ಬಲವಂತದಿಂದ ನಿನ್ನನ್ನು ಲಗ್ನವಾಗುತ್ತೇನೆ ಎಂದು. ಆ ಪ್ರಕಾರ ಸತ್ಯಭಾಮೆ ವರನಂದಿಯಾಗಿ ಜನಿಸಿ ಮೇಲುಕೋಟೆಯ ಚೆಲುವರಾಯನನ್ನು ಲಗ್ನವಾದ ಕಥೆ ಈ ಕಾವ್ಯದಲ್ಲಿ ಬರುತ್ತದೆ. ಚೆಲುವಾಂಬೆ ವರನಂದಿಯ ಯೌವನದ ಸೊಬಗನ್ನು ಸೊಗಸಾಗಿ ವರ್ಣಿಸಿದ್ದಾಳೆ. ಆಕೆಯ ವಿರಹವ್ಯಥೆ ಮನಕರಗುವಂತಿದೆ. ಮದುವೆಯ ಮಂಗಳ ಮಹೋತ್ಸವಗಳ ವರ್ಣನೆ ರಮ್ಯವಾಗಿದೆ. ತುಲಾಕಾವೇರಿ ಮಹಾತ್ಮ್ಯವನ್ನು ಶ್ರೀನಿವಾಸನೆಂಬವನು ರಚಿಸಿ ಚೆಲುವಾಂಬೆಗೆ ಅಂಕಿತಗೊಳಿಸಿರಬಹುದೆಂದು ಕವಿಚರಿತೆಕಾರರ ಅಭಿಪ್ರಯ. ಇವಳ ಎಲ್ಲ ಕೃತಿಗಳಲ್ಲೂ ಭಕ್ತಿರಸವೇ ಪ್ರಧಾನ. ವೈಷ್ಣವಭಕ್ತಿ ಪರಂಪರೆಯಲ್ಲಿ ಈ ಕೃತಿಗಳು ಮೂಡಿಬಂದಿದೆ. ಕೃಷ್ಣಕರ್ಣಾಮೃತವ್ಯಾಖ್ಯೆ ಈಕೆಯ ಸಂಸ್ಕøತ ಕನ್ನಡ ಪಾಂಡಿತ್ಯಕ್ಕೆ ಕೈಗನ್ನಡಿ, ಸಂಸ್ಕøತ ಮೂಲಕೃತಿಗೆ ಶಬ್ದಶಃ ಕನ್ನಡ ಟೀಕೆಯನ್ನು ಇಲ್ಲಿ ಕೊಡಲಾಗಿದೆ.

	ಪತಿಯ ಆಜ್ಞೆಯಂತೆ ತಾನು ಕಾವ್ಯರಚಿಸಿದುದಾಗಿಯೂ ಕೃತಿಗೆ ಕರ್ತ ಚೆಲ್ವರಾಯ, ತನಗೆ ಸನ್ಮತಿಯಿತ್ತವನು ಶ್ರೀನಿವಾಸ-ಎಂದು ಚೆಲುವಾಂಬೆ ತನ್ನ ಭಕ್ತಭಾವವನ್ನು ವ್ಯಕ್ತಗೊಳಿಸಿದ್ದಾಳೆ. ಅಚ್ಚಗನ್ನಡದ ಇನಿವಾತುಗಳಲ್ಲಿ ಕೃತಿರಚನೆ ಮಾಡಿರುವ ಚೆಲುವಾಂಬೆ ಕನ್ನಡ ಕವಯಿತ್ರಿಯರ ಶ್ರೇಣಿಯಲ್ಲಿ ಪ್ರಮುಖಳಾಗಿದ್ದಾಳೆ.
(ಎಸ್.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ